ಧಾರವಾಡ –
ಎನ್‌ಪಿಎಸ್ ಬೇಡ, ಒಪಿಎಸ್ ಬೇಕು ಹೀಗೆ ಬೇಡಿಕೆ ಇಟ್ಟುಕೊಂಡು ಧಾರವಾಡದಲ್ಲಿ ಶಿಕ್ಷಕರು–ನೌಕರರ ಬೃಹತ್ ಘರ್ಜನೆ ಮಾಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದರು ಹೌದು ನಿವೃತ್ತಿಯ ಬದುಕು ಅನಿಶ್ಚಿತತೆಯಲ್ಲಿ ಸಾಗಬಾರದು ಸರ್ಕಾರಿ ನೌಕರರ ಸೇವೆಗೆ ಗೌರವ ಸಿಗಬೇಕಾದರೆ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿಯಾಗ ಲೇಬೇಕು ಈ ಘೋಷಣೆಯೊಂದಿಗೆ ಧಾರವಾಡ ನಗರ ಶಿಕ್ಷಕರು ಹಾಗೂ ಮಾಧ್ಯಮಿಕ ಶಾಲಾ ನೌಕರರ ಹೋರಾಟದ ಕಣವಾಗಿ ಮಾರ್ಪಟ್ಟಿತು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ (ರಿ), ಬೆಂಗಳೂರು, ಧಾರವಾಡ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ (ರಿ), ಹುಬ್ಬಳ್ಳಿ, ಧಾರವಾಡ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಪ್ರತಿಭಟನೆ ಸರ್ಕಾರದ ಗಮನ ಸೆಳೆಯುವಂತಿತ್ತು.
ನಗರದ ಆರ್.ಎಲ್.ಎಸ್. ಶಾಲಾ ಮೈದಾನದಿಂದ ಆರಂಭ ವಾದ ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಶಿಕ್ಷಕರು ಮತ್ತು ನೌಕರರು ಭಾಗವಹಿ ಸಿದರು. “ಎನ್‌ಪಿಎಸ್ ರದ್ದು ಮಾಡಿ, ಒಪಿಎಸ್ ಜಾರಿಗೊಳಿಸಿ” ಎಂಬ ಘೋಷಣೆಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಬಳಿಕ ಜಿಲ್ಲಾಾಧಿಕಾರಿಗಳ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸ ಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ನಾರಾಯಣ ಭಜಂತ್ರಿ, ಜಿಲ್ಲಾ ಅಧ್ಯಕ್ಷ ಪ್ರಮೋದ್ ಹರಿಬಟ್ಟ, ಬಿ.ಜಿ. ಬಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಧರ ಗಸ್ತಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ಉಪಾಧ್ಯಕ್ಷ ಎನ್.ಎಸ್. ಗೋವಿಂದರೆಡ್ಡಿ, ಜಿಲ್ಲಾಧ್ಯಕ್ಷ ವಿ.ಎಸ್. ಹುದ್ದಾರ, ಕಾರ್ಯದರ್ಶಿ ಎನ್.ಎನ್. ಸವಣೂರ,
ಸಂಯುಕ್ತ ಕಾರ್ಯದರ್ಶಿ ಆರ್.ಬಿ. ಕೊಣ್ಣೂರ, ಮಾಧ್ಯಮಿಕ ಶಿಕ್ಷಕರ ಸಂಘದ ಮುಖಂಡ ಸಂದೀಪ ಬೂದಿಹಾಳ ಹಾಗೂ ಪದವಿಪೂರ್ವ ಉಪನ್ಯಾಸಕರ ಸಂಘದ ಮುಖಂಡ ಶೇಖರ ಗೋಳ, ಪೀರೋಜ ಗುಡೆನಕಟ್ಟಿ , ಎಸ್ ಆರ್ ರಾಚಣ್ಣವರ, ಈಶ್ವರ ಕೊಡ್ಲಿ, ರಮೇಶ ತಳವಾರ, ಶರಣು ಅಂಗಡಿ, ಮಂಜುನಾಥ ಕುರಕುರಿ, ಬಸವರಾಜ ವಾಸನದ, ವಹಿಸಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯಕರು, “ರಾಷ್ಟ್ರೀಯ ಪಿಂಚಣಿ ಯೋಜನೆಯು ನಿವೃತ್ತ ನೌಕರರಿಗೆ ಖಚಿತ ಆದಾಯ ಅಥವಾ ಸಾಮಾಜಿಕ ಭದ್ರತೆಯನ್ನು ಒದಗಿಸುವುದಿಲ್ಲ. ಸರ್ಕಾರಿ ಸೇವೆಯಲ್ಲಿ ಜೀವಮಾನವಿಡೀ ದುಡಿದ ನೌಕರರು ನಿವೃತ್ತಿಯ ನಂತರ ಗೌರವಯುತ ಬದುಕು ನಡೆಸಲು ಹಳೆಯ ಪಿಂಚಣಿ ಯೋಜನೆಯೇ ಸೂಕ್ತ ಮಾರ್ಗವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಮುಖಂಡರು ಮಾತನಾಡಿ “ಎನ್‌ಪಿಎಸ್ ಮಾರುಕಟ್ಟೆ ಆಧಾರಿತ ಯೋಜನೆಯಾಗಿದ್ದು, ನಿವೃತ್ತಿಯ ನಂತರ ನೌಕರರ ಬದುಕಿಗೆ ಖಚಿತ ಭದ್ರತೆ ನೀಡುವುದಿಲ್ಲ. ಹಲವು ರಾಜ್ಯಗಳು ಈಗಾಗಲೇ ಒಪಿಎಸ್ ಅನ್ನು ಮರುಜಾರಿಗೊಳಿಸಿವೆ. ಕರ್ನಾಟಕ ಸರ್ಕಾರವೂ ನೌಕರರ ನ್ಯಾಯಸಮ್ಮತ ಬೇಡಿಕೆಗೆ ಸ್ಪಂದಿಸಿ ಹಳೆಯ ಪಿಂಚಣಿ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು,” ಎಂದು ಆಗ್ರಹಿಸಿದರು.
ಕರ್ನಾಟಕ ಸರ್ಕಾರವು ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿ, ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಅನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಮುಖಂಡರು ನೀಡಿದರು.
ಪ್ರತಿಭಟನೆಯಲ್ಲಿ ಶಿಕ್ಷಕರು, ಶಾಲಾ ನೌಕರರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉತ್ಸಾಹದಿಂದ ಭಾಗವಹಿ ಸಿದ್ದರು. ಶಾಂತಿಯುತವಾಗಿ ನಡೆದ ಈ ಪ್ರತಿಭಟನೆ ಸರ್ಕಾರದತ್ತ ನೌಕರರ ಏಕಮತದ ಧ್ವನಿಯನ್ನು ತಲುಪಿಸುವ ಪ್ರಯತ್ನವಾಗಿ ಗಮನ ಸೆಳೆಯಿತು.
ಸರ್ಕಾರದ ಮುಂದಿನ ನಿರ್ಧಾರವೇ ಲಕ್ಷಾಂತರ ಸರ್ಕಾರಿ ನೌಕರರ ನಿವೃತ್ತಿ ಬದುಕಿನ ಭವಿಷ್ಯವನ್ನು ನಿರ್ಧರಿಸಲಿದೆ ಎಂಬ ಸಂದೇಶದೊಂದಿಗೆ ಧಾರವಾಡದ ಈ ಹೋರಾಟ ಅಂತ್ಯ ಗೊಂಡಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..



