ರಂಗಪಟ್ಟಣ (ಮಂಡ್ಯ ಜಿಲ್ಲೆ) –
ಪಟ್ಟಣದ ಭೂ ದಾಖಲೆಗಳ ಕಚೇರಿಯಲ್ಲಿ ನಡೆದಿರುವ ನಕಲಿ ದಾಖಲೆ, ನಕಲಿ ಸೀಲುಗಳ ಬಳಕೆ ಆರೋಪದ ಹಿನ್ನೆಲೆಯಲ್ಲಿ, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಖಾಸಗಿ ವ್ಯಕ್ತಿ ಮತ್ತು 8 ಸರ್ಕಾರಿ ನೌಕರರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ದ್ದಾರೆ ಭೂದಾಖಲೆಗಳ ಕಚೇರಿಯಲ್ಲಿ ಸರ್ಕಾರಿ ನೌಕರನ ಸೋಗಿನಲ್ಲಿ ಕೆಲಸ ಮಾಡುತ್ತಿದ್ದ ನಿತಿನ್ ಪ್ರೇಮಾನಂದ ಮಹಾಲೆ, ಸರ್ವೆ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ನಿಶಾ ಸಾರಿಕಾ ಮಲ್ಲಿ ಅವರನ್ನು ಬಂಧಿಸ ಲಾಗಿದೆ ಪ್ರಮುಖ ಆರೋಪಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎ.ಡಿ.ಎಲ್.ಆರ್) ಮಹಮದ್ ಹುಸೇನ್ ತಲೆ ಮರೆಸಿಕೊಂಡಿದ್ದಾರೆ.
ಎಡಿಎಲ್‌ಆರ್ ಮಹಮದ್ ಹುಸೇನ್ ಮತ್ತು ನಿತಿನ್ ನವೀನ್ ಮಹಾಲೆ ಅವರಿದ್ದ ಮನೆಯಲ್ಲಿ ದಾಖಲೆ ಇಲ್ಲದ ₹1,40,200 ನಗದು ವಶಪಡಿಸಿಕೊಳ್ಳಲಾಗಿದೆ. ಪ್ರೇಮಾನಂದ ಮಹಾಲೆ ಅವರ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹಣದ ವಹಿವಾಟು ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಶೋಧನಾ ವಾರೆಂಟ್ ಆಧರಿಸಿ ಪಾಂಡವಪುರ ಉಪ ವಿಭಾಗಾ ಧಿಕಾರಿ, ಶ್ರೀರಂಗಪಟ್ಟಣ ತಹಶೀಲ್ದಾರ್, ಎಡಿಎಲ್‌ಆರ್, ಮಹದೇವಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅವರ ಕಚೇರಿ ಮತ್ತು ಮನೆಗಳಲ್ಲಿ ಕೂಡ ಶೋಧ ಕಾರ್ಯ ನಡೆಸಲಾಗಿದೆ.
ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶಬಾಬು ಎಸ್. ಮಾರ್ಗ ದರ್ಶನದಲ್ಲಿ, ಡಿವೈಎಸ್ಪಿ ಸುನಿಲ್‌ಕುಮಾರ್ ಎಚ್.ಟಿ, ಇನ್‌ಸ್ಪೆಕ್ಟರ್‌ಗಳಾದ ರವಿಕುಮಾರ್ ಎಂ., ಬ್ಯಾಟರಾಯಗೌಡ, ಲೇಪಾಕ್ಷಮೂರ್ತಿ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ
ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ನಿಶಾ ಸಾರಿಕಾ ಮಲ್ಲಿ ಅವರು ತಾವು ಬಳಸುವ ಮೋಜಿಣಿ ತಂತ್ರಾಂಶದ ಬಳಕೆದಾರರ ಐಡಿ (ಯೂಸರ್ ನೇಮ್) ಮತ್ತು ಪಾಸ್‌ವರ್ಡ್ ಹಾಗೂ ತಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ನಿತಿನ್ ಪ್ರೇಮಾನಂದ ಮಹಾಲೆ ಅವರಿಗೆ ನೀಡಿದ್ದು, ಆತ ಆಕಾರ್ ಬಂದ್ ದಾಖಲೆಗಳನ್ನು ಡಿಜಿಟಲೀ ಕರಣ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.
ಭೂದಾಖಲೆಗಳ ಸಹಾಯಕ ನಿರ್ದೇಶಕ ಮಹಮದ್ ಹುಸೇನ್ ಮತ್ತು ನಿತಿನ್ ಪ್ರೇಮಾನಂದ ಮಹಾಲೆ ವಾಸವಿದ್ದ ಮೈಸೂರಿನ ಶಿವರಾತ್ರೀಶ್ವರ ನಗರದ ಮನೆಯಲ್ಲಿ ಹುಣಸೂರು ತಹಶೀಲ್ದಾರ್, ಅಲ್ಲಿನ ಭೂಮಾಪಕರಾದ ಶಂಕರ್, ಕೆ.ಎನ್. ರಮೇಶ್ ಮತ್ತು ತಾಲ್ಲೂಕು ಕಚೇರಿಯ ಪರ್ಯಾವೇಕ್ಷಕರ ಸಹಿಯುಳ್ಳ ಎಲ್.ಆರ್. ಟಿಪ್ಪಣಿ ಪುಸ್ತಕದ ದಾಖಲೆಗಳು ಪತ್ತೆಯಾಗಿವೆ.
ಇದೇ ಮನೆಯಲ್ಲಿ ಸಕಲೇಶಪುರ ತಹಶೀಲ್ದಾರ್, ಪರ್ಯಾ ವೇಕ್ಷಕ, ಎಡಿಎಲ್‌ಆರ್ ಕಚೇರಿಯ ಅಧೀಕ್ಷಕ, ಭೂಮಾಪಕ ಶಂಕರ್, ಕೆ.ಎನ್. ರಮೇಶ್, ಕೆ.ಎಸ್. ದೇವರಾಜ್, ಡಿ.ಎಸ್. ಗಿರೀಶ್, ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಭೂಮಾಪಕರ ಹೆಸರಿನ ಸೀಲುಗಳು ಕೂಡ ದೊರೆತಿವೆ.
ಸುದ್ದಿ ಸಂತೆ ನ್ಯೂಸ್ ಮಂಡ್ಯ……



