ಕೊಪ್ಪಳ -
ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ 2026ರ ಹಿನ್ನೆಲೆಯಲ್ಲಿ ಮತದಾನ ಹಾಗೂ ಮತ ಎಣಿಕೆ ದಿನಗಳಂದು ರಜೆ ಘೋಷಿಸಿ ಚುನಾವಣಾಧಿ ಕಾರಿಗಳು ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಪ್ರಕಟಿಸಿರುವ ವೇಳಾಪಟ್ಟಿಯಂತೆ, ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನವು 2026ರ ಅಕ್ಟೋಬರ್ 23ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಮತ ಎಣಿಕೆ ಕಾರ್ಯವು ಅಕ್ಟೋಬರ್ 27ರಂದು ಬೆಳಿಗ್ಗೆ 8 ಗಂಟೆಯಿಂದ ಕಲಬುರಗಿ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಭಾಸ್ಕರ ಭವನದಲ್ಲಿ (Mathematics Department Bhaskar Hall, Gulbarga University) ಜರುಗಲಿದೆ.
ಮತದಾನ ಮತ್ತು ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದ್ದು, ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ನೋಂದಾಯಿತ ಶಿಕ್ಷಕ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಮತದಾನದ ದಿನದಂದು (ಅ. 23ರಂದು) ರಜೆ ನೀಡಲಾಗಿದೆ.
ಅದೇ ರೀತಿ ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕೇಂದ್ರವಾಗಿರುವ ಕಲಬುರಗಿ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಭಾಸ್ಕರ ಭವನದ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಮತ ಎಣಿಕೆಯ ದಿನದಂದು (ಅ. 27ರಂದು) ರಜೆ ಘೋಷಿಸಲಾಗಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಗಳು ಆಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ.....