ರಾಮದುರ್ಗ -
SSLC ಪರೀಕ್ಷಾ ಫಾರ್ಮ್ ಭರ್ತಿ ಮಾಡಲು ₹2,000 ಹಣ ನೀಡಬೇಕೆಂದು ಮುಖ್ಯ ಶಿಕ್ಷಕ ಒತ್ತಾಯಿಸುತ್ತಿ ದ್ದಾರೆ ಎಂದು ಆರೋಪಿಸಿ ಮಕ್ಕಳ ಪಾಲಕರು ಪ್ರತಿಭಟಿಸಿದ ಘಟನೆ ನಡೆದಿದೆ.ವಿದ್ಯಾಚೇತನ ಶಾಲಾ ಆವರಣದಲ್ಲಿರುವ ನೇತಾಜಿ ಸುಭಾಸ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜೆ.ಸಿ. ಶೀಲವಂತಮಠ ಎಂಬುವರು ಶಾಲೆಯಲ್ಲಿರುವ ಒಟ್ಟು 167 ಮಕ್ಕಳು ಮುಂಬರುವ SSLC ಪರೀಕ್ಷೆಗೆ ಹಾಜರಾಗಲು ಮತ್ತು ಪರೀಕ್ಷೆಯಲ್ಲಿ ಸಹಾಯ ಮಾಡುವ ಆಮಿಷವೊಡ್ಡಿ ಹಣ ಕೇಳಿದ್ದರು ಎಂದು ದೂರಿದ್ದಾರೆ ಶೀಲವಂತಮಠ ಅವರನ್ನು ಕೂಡಿಹಾಕಿದ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯ ಸಾಮಾನ್ಯ ವಿದ್ಯಾರ್ಥಿಗಳು ₹ 2,000 ಮತ್ತು ಪರಿಶಿಷ್ಟ ಜಾತಿಯ ಮಕ್ಕಳು ₹ 750 ನೀಡಿದರೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗುವುದು ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸುವುದಾಗಿ ಆಮಿಷ ತೋರಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಕ್ಕಳನ್ನು ಬೆದರಿಸುತ್ತಿದ್ದರು. ಕೆಲವರಿಂದ ಹಣ ವಸೂಲಿ ಸಹ ಮಾಡಿದ್ದರು ಎಂದು ಪಾಲಕರು ಆರೋಪಿಸಿದರು.ಅದೇ ಶಾಲೆಯ ಪಾಲಕ, ಪುರ ಸಭೆಯ ಮಾಜಿ ಸದಸ್ಯ ನಾಗರಾಜ ಕಟ್ಟಿಮನಿ, ವಿಜಯ ಸೇನಾ ಸಮಿತಿಯ ವಿಜಯ ನಾಯ್ಕ ಅವರು ಮಕ್ಕಳನ್ನು ಬೆಂಬಲಿಸಿ ಶಿಕ್ಷಕರನ್ನು ಅಮಾನತು ಮಾಡುವಂತೆ ಶಾಲೆಯ ಕಾರ್ಯಾಲಯದ ಮುಂದೆ ಧರಣಿ ನಡೆಸಿದರು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ ಹಿರೇಮಠ ಅವರು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದರು.ಮುಖ್ಯ ಶಿಕ್ಷಕ ಜೆ.ಸಿ. ಶೀಲವಂತಮಠ ಅವರು 8ನೇ ಮತ್ತು 9ನೇ ತರಗತಿಗಳಿಗೆ ಹಾಜರಾಗದ ಸಾಕಷ್ಟು ಮಕ್ಕಳ ಪಾಲಕರನ್ನು ಕರೆಯಿಸಿ ಅವರಿಂದ ಹಣ ಪಡೆದು ಪ್ರವೇಶ ನೀಡಿದ್ದಾರೆ. ಮಕ್ಕಳಿಂದ ಹಣ ಪಡೆಯು ವುದು ಬೇಡ ಎಂದು ತಿಳಿವಳಿಕೆ ನೀಡಿದ ಉಳಿದ ಶಿಕ್ಷಕರಿಗೆ ಬೇರೆ ಕೆಲಸದ ಮೇಲೆ ಬೇರೆ ಕಡೆಗೆ ನಿಯೋಜನೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಡಿಡಿಪಿಐ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪ್ರಭಾರ ಶಿಕ್ಷಣಾಧಿಕಾರಿಗಳು ಆರೋಪ ಹೊತ್ತಿರುವ ಜೆ.ಸಿ. ಶೀಲವಂತಮಠ ಅವರ ಮೇಲೆ ಶಿಸ್ತು ಕ್ರಮ ಜರುಗಿ ಸುವಂತೆ ಕೋರಿದ್ದಾರೆ. ಅವರಿಗೆ ದೀರ್ಘ ರಜೆಯ ಮೇಲೆ ಹೋಗುವಂತೆ ಸೂಚಿಸಲಾಗಿದೆ ಎಂದು ಪ್ರಭಾರ ಶಿಕ್ಷಣಾಧಿಕಾರಿ ರಾಜಶೇಖರ ಹಿರೇಮಠ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ರಾಮದುರ್ಗ.....