ನವಲಗುಂದ –
2ನೇ ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತ ಚುನಾವಣೆಗೆ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ತರಭೇತಿ ಕಾರ್ಯಕ್ರಮ ನಡೆಯಿತು. ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಗಳ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ನವಲಗುಂದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ 2ನೇ ಹಂತದ ತರಬೇತಿ ಜರುಗಿತು.
ನೋಡಲ್ ಅಧಿಕಾರಿಯಾಗಿರುವ ಆಹಾರ ಇಲಾಖೆಯ ಜಂಟಿನಿರ್ದೇಶಕ ಸದಾಶಿವ ಮರ್ಜಿ ಅವರು ಮಾದರಿ ನೀತಿ ಸಂಹಿತೆ, ಕೋವಿಡ್ ನಿಯಂತ್ರಣ ಕ್ರಮಗಳ ಪಾಲನೆ, ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕಾರ್ಯ, ಮತ ಎಣಿಕೆ ಮೊದಲಾದ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ತಹಶೀಲ್ದಾರ ನವೀನ್ ಹುಲ್ಲೂರ ಮಾತನಾಡಿ, ತಾಲೂಕಿನಲ್ಲಿ 91 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
32769 ಪುರುಷ, 30983 ಮಹಿಳೆ, ಇತರೆ 1 ಸೇರಿ 63753 ಮತದಾರರಿದ್ದಾರೆ. ಇವರಲ್ಲಿ 14 ಪುರುಷ ಮತ್ತು 258 ಮಹಿಳಾ ಸೇವಾ ಮತದಾರರಿದ್ದಾರೆ. 72 ಸಾಮಾನ್ಯ ಮತಗಟ್ಟೆಗಳು, 8 ಸೂಕ್ಷ್ಮ, 11 ಅತೀಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಎಲ್ಲ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಾಂಬಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪದಕಿ, ಪೊಲೀಸ್ ಇನ್ಸ್ಪೇಕ್ಟರ್ ಚಂದ್ರಶೇಖರ್ ಮಠಪತಿ ಸೇರಿದಂತೆ ಹಲವು ಅಧಿಕಾರಿಗಳು ಸಿಬ್ಬಂದಿ ವರ್ಗದವರು ಮತ್ತಿತರರು ತರಭೇತಿ ಕಾರ್ಯಾಕ್ರಮದಲ್ಲಿ ಪಾಲ್ಗೊಂಡಿದ್ದರು.