ಬೆಂಗಳೂರು –
ಶಾಲೆಯಿಂದ ಹೊರಗುಳಿದ ಪ್ರತಿ ಮಗುವನ್ನು ಪತ್ತೆ ಹಚ್ಚಿ ಮರಳಿ ಶಾಲೆಗೆ ಕರೆತರಲು ಕ್ರಮ ಕೈಗೊಳ್ಳುವಂತೆ ರಾಜ್ಯ ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಎಚ್ಚೆತ್ತ ಶಿಕ್ಷಣ ಇಲಾಖೆಯು ಸೆಪ್ಟೆಂಬರ್ 19ರೊಳಗೆ ಎಲ್ಲಾ ಮಕ್ಕಳನ್ನು ಪತ್ತೆ ಮಾಡಿ ಮರಳಿ ಶಾಲೆಗೆ ದಾಖಲಿಸಲು ಕ್ರಮ ವಹಿಸುವಂತೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ
ಶಾಲೆಯಿಂದ ಹೊರಗುಳಿದ ಮಕ್ಕಳ ಸಂಬಂಧ ಇತ್ತೀಚೆಗೆ ಹೈಕೋರ್ಟ್ ನಡೆಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ರಾಜ್ಯ ಸರಕಾರ ರಾಜ್ಯದಲ್ಲಿ ಒಟ್ಟು 24,308 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.ಈ ಪೈಕಿ 18,584 ಮಂದಿಯನ್ನು ಪತ್ತೆ ಮಾಡಲಾಗಿದೆ.ಉಳಿದ 5,724 ಮಂದಿಯನ್ನು ಪತ್ತೆ ಹಚ್ಚಬೇಕಿದೆ ಎಂದು ತಿಳಿಸಿತ್ತು. ಅಲ್ಲದೆ ಪತ್ತೆ ಹಚ್ಚಿರುವ 18,584 ಮಕ್ಕಳಲ್ಲಿ 14,871 ಮಕ್ಕಳನ್ನು ಶಾಲೆಗೆ ಮರಳಿ ದಾಖಲಿಸಿಕೊಳ್ಳಲಾಗಿದೆ.ಇನ್ನೂ 3,713 ಮಕ್ಕಳ ದಾಖಲಾತಿ ಆಗಬೇಕಿದೆ ಎಂದು ವರದಿ ನೀಡಿತ್ತು.
ಬಳಿಕ ಹೈಕೋರ್ಟ್ ಶಾಲೆಯಿಂದ ಹೊರಗುಳಿದಿರುವ ಪ್ರತಿಯೊಬ್ಬ ಮಕ್ಕಳನ್ನೂ ಪತ್ತೆ ಹಚ್ಚಬೇಕು.ಅದೇ ರೀತಿ ಪತ್ತೆ ಹಚ್ಚಿದ ಪ್ರತಿ ಮಕ್ಕಳನ್ನೂ ಮರಳಿ ಶಾಲೆಗೆ ದಾಖಲಾತಿ ನೀಡಬೇಕು.ಯಾವುದೇ ಮಗುವೂ ಶಿಕ್ಷಣದಿಂದ ವಂಚಿತ ವಾಗಬಾರದೆಂದು ಕಟ್ಟು ನಿಟ್ಟಾಗಿ ಸೂಚಿಸಿತ್ತು.ಈ ಸಂಬಂಧ ಕೈಗೊಂಡ ಕ್ರಮ ಕೈಗೊಂಡುಅನುಪಾಲನ ವರದಿ ಸಲ್ಲಿಸಲು ಕೂಡ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರುವ ಅಧಿಕಾರಿಗಳು ಇದುವರೆಗೆ ಪತ್ತೆಯಾಗದ 5,700ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆ ಹೆಚ್ಚುವ ಕೆಲಸ ಮಾಡಬೇಕು.ಪತ್ತೆ ಹಚ್ಚಿರುವವರ ಪೈಕಿ ದಾಖಲಾತಿ ಆಗದೆ ಇರುವ 3,700ಕ್ಕೂ ಹೆಚ್ಚು ಮಕ್ಕಳನ್ನು ಆದಷ್ಟು ಬೇಗ ಶಾಲೆಗೆ ದಾಖಲಾತಿ ನೀಡಿ ಸೆಪ್ಟೆಂಬರ್ 19ರೊಳಗೆ ಕೇಂದ್ರ ಕಚೇರಿಗೆ ಮಾಹಿತಿ ನೀಡ ಬೇಕೆಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನೆ ನಿರ್ದೇಶಕಿ ಬಿ.ಬಿ.ಕಾವೇರಿ ರಾಜ್ಯದ ಎಲ್ಲಾ ಡಿಡಿಪಿಐ ಗಳಿಗೆ ಸೂಚನೆ ನೀಡಿ ಶಿಕ್ಷಕರು ಈ ಒಂದು ಕಾರ್ಯವನ್ನು ಮಾಡು ವಂತೆ ಸೂಚಿಸಿದ್ದಾರೆ.