ಕ್ಯಾನ್‌ಬೆರ್ರಾತ –
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಈಗಾಗಲೇ ಆಸ್ಟ್ರೇಲಿಯಾ ತಂಡದ ವಿರುದ್ದ ಎರಡು ಏಕದಿನ ಪಂದ್ಯಗಳನ್ನು ಸೋತಿದೆ.ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ಈಗ ಒಂದು ಪಂದ್ಯವನ್ನಾದರೂ ಗೆಲ್ಲಬೇಕು ಎಂಬ ತವಕದಲ್ಲಿದೆ. ಆದರೆ ಆಸ್ಟ್ರೇಲಿಯಾದ ನಾಯಕ ಆ್ಯರನ್ ಫಿಂಚ್‌ಗೆ ಏಕದಿನ ಕ್ರಿಕೆಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದ್ದಾರೆ.

ಇಂದು ಬುಧವಾರ ಇಲ್ಲಿ ನಡೆಯುವ ಮೂರನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.ಕೊರೊನಾ ಕಾಲಘಟ್ಟದಲ್ಲಿ ಆತಿಥ್ಯ ವಹಿಸಿದ ಮೊದಲ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2–0 ಯಿಂದ ಕೈವಶ ಮಾಡಿಕೊಂಡಿದೆ.

ಆದರೆ, ಭಾರತ ತಂಡಕ್ಕೆ ಇನ್ನೂ ಒಂದು ಪಂದ್ಯವನ್ನೂ ಜಯಿಸಲು ಸಾಧ್ಯವಾಗಿಲ್ಲ. ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಪಡೆಯ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಬ್ಯಾಟಿಂಗ್‌ನಲ್ಲಿಯೂ ಅರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡಿದ್ದರು.

ಆದರೆ ದೊಡ್ಡ ಜೊತೆಯಾಟ ಆಡುವಲ್ಲಿ ಎಡವಿದ್ದರು. ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್ ತಮ್ಮ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಆದರೆ ‘ಫಿನಿಷರ್‘ ಕೊರತೆ ಕಾಡುತ್ತಿದೆ.ಬೌಲರ್‌ಗಳು ಯಥೇಚ್ಚವಾಗಿ ರನ್ ಬಿಟ್ಟುಕೊಡುತ್ತಿರುವುದು ಚಿಂತೆಯ ವಿಷಯವಾಗಿದೆ. ಆದ್ದರಿಂದ ಈ ಪಂದ್ಯದಲ್ಲಿ ನವದೀಪ್ ಸೈನಿಗೆ ವಿಶ್ರಾಂತಿ ಕೊಟ್ಟು ಶಾರ್ದೂಲ್ ಠಾಕೂರ್‌ಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ. ಯಾರ್ಕರ್ ಪರಿಣತ ಟಿ. ನಟರಾಜನ್ ಅವರಿಗೆ ಪಾದಾರ್ಪಣೆಯ ಅವಕಾಶವೂ ಸಿಗಬಹುದು. ಟೆಸ್ಟ್ ಸರಣಿಯಲ್ಲಿ ಫಿಟ್ ಆಗಿ ಉಳಿಯಲು ಬೂಮ್ರಾ ಮತ್ತು ಮೊಹಮ್ಮದ್ ಶಮಿಗೆ ವಿಶ್ರಾಂತಿ ಕೊಟ್ಟರೆ, ಈ ಇಬ್ಬರೂ ಬೌಲರ್‌ಗಳಿಗೆ ಅವಕಾಶ ಸಿಗುವುದು ಬಹುತೇಕ ಖಚಿತ.ಮುಂಬರುವ ಟಿ20 ಮತ್ತು ಟೆಸ್ಟ್ ಸರಣಿಗಳಲ್ಲಿ ಗೆಲುವು ಸಾಧಿಸಬೇಕಾದರೆ ಬೌಲಿಂಗ್ ಪಡೆಯನ್ನು ಬಲಿಷ್ಠಗೊಳಿಸಲು ಈ ಪ್ರಯೋಗಗಳಿಗೆ ತಂಡದ ಆಡಳಿತ ಕೈಹಾಕುವುದು ಅನಿವಾರ್ಯವಾಗಿದೆ.

ಕಳೆದೆರಡು ಪಂದ್ಯಗಳಲ್ಲಿ ಭಾರತದ ಬೌಲರ್‌ಗಳು ಎದುರಾಳಿಗಳಿಗೆ ಒಟ್ಟು 69 ಬೌಂಡರಿ ಮತ್ತು 19 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇಷ್ಟು ದುರ್ಬಲ ಬೌಲಿಂಗ್ ಅನ್ನು ತಂಡವು ಹಿಂದೆಂದೂ ಕಂಡಿರಲಿಲ್ಲ.ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ನೀಡಿದ್ದ ಡೇವಿಡ್ ವಾರ್ನರ್ ಗಾಯಗೊಂಡಿದ್ದು ಈ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಆದರೆ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿರುವ ಸ್ಟೀವನ್ ಸ್ಮಿತ್ ಅವರಿಗೆ ಕಡಿವಾಣ ಹಾಕುವ ಸವಾಲು ಬೌಲರ್‌ಗಳಿಗೆ ಇದೆ.

ಆ್ಯರನ್ ಫಿಂಚ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಾರ್ನಸ್ ಲಾಬುಷೇನ್ ಅವರನ್ನು ಕೊನೆಯ ಹಂತದ ಓವರ್‌ಗಳಲ್ಲಿ ಕಟ್ಟಿಹಾಕುವ ತಂತ್ರ ಕಂಡುಕೊಳ್ಳದಿದ್ದರೆ ಅವರ ಬ್ಯಾಟಿಂಗ್ ಭರಾಟೆಯಲ್ಲಿ ವಿರಾಟ್ ಬಳಗ ಮಂಕಾಗುವುದನ್ನು ಅಲ್ಲಗಳೆಯುವಂತಿಲ್ಲ.ಈ ವರ್ಷದ ಆರಂಭದಲ್ಲಿ ಭಾರತ ತಂಡವು ನ್ಯೂಜಿಲೆಂಡ್‌ನಲ್ಲಿ 0–3ರಿಂದ ಸರಣಿ ಸೋತಿತ್ತು. ಈಗ ಆಸ್ಟ್ರೇಲಿಯಾದೆದುರೂ ಅಂತಹ ಆತಂಕ ಎದುರಿಸುತ್ತಿದೆ.
ಪಂದ್ಯ ಆರಂಭ – ಬೆಳಿಗ್ಗೆ 9.10 ನೇರಪ್ರಸಾರ – ಸೋನಿ ನೆಟ್‌ವರ್ಕ್