ಧಾರವಾಡ –
ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲೆಗೆ ಇಂದು ಆಗಮಿಸಿದ ಕೋವಿಸೀಲ್ಡ್ ಲಸಿಕೆಯನ್ನು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಹಾಗೂ ಉಪ ವಿಭಾಗಾಧಿಕಾರಿ ಡಾ. ಗೋಪಾಲ ಕೃಷ್ಣ ಬಿ. ಅವರು ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಸ್ವಾಗತಿಸಿದರು.
ಜಿಲ್ಲಾಧಿಕಾರಿ ಮಾತನಾಡಿ ಧಾರವಾಡ ಜಿಲ್ಲೆಗೆ ಇಂದು 11 ಸಾವಿರ ಕೊವೀಡ್-19 ರ ಕೋವಿಸೀಲ್ಡ್ ಲಸಿಕೆಯು ಬೆಳಗಾವಿ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ಆಗಮಿಸಿದ್ದು, ರಾಜ್ಯ ಸರ್ಕಾರದಿಂದ ಹೊಸದಾಗಿ ನೀಡಿರುವ ಐ.ಎಲ್.ಆರ್ ಲಸಿಕಾ ಸಂಗ್ರಹಣದ ಕೋಲ್ಡ್ ಸ್ಟೋರೇಜ್ ನಲ್ಲಿ ಲಸಿಕೆಯನ್ನು ಸಂಗ್ರಹಿಸಿ ಇಡಲಾಗುತ್ತದೆ. ಇದು ಸುಮಾರು 40 ಸಾವಿರ ಲಸಿಕಾ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಈಗ ಬಂದಿರುವ ಲಸಿಕೆಯನ್ನು ಜನವರಿ 15 ರಂದು ಈಗಾಗಲೇ ಸಿದ್ಧಗೊಳಿಸಿರುವ ಏಳು ಲಸಿಕಾ ಕೇಂದ್ರಗಳಿಗೆ ಜಿಲ್ಲಾ ಲಸಿಕಾ ಉಗ್ರಾಣ ಕೇಂದ್ರದಿಂದ ಸರಬರಾಜು ಮಾಡಲಾಗುತ್ತದೆ ಎಂದರು.
ಜನವರಿ 16 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಾದ್ಯಂತ ಲಸಿಕಾಕರಣಕ್ಕೆ ಚಾಲನೆ ನೀಡಲಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಆನ್‌ಲೈನ್ ಮೂಲಕ ಪ್ರಧಾನ ಮಂತ್ರಿ ಗಳಿಂದ ಕೋವಿಸೀಲ್ಡ್ ಲಸಿಕಾಕರಣಕ್ಕೆ ಚಾಲನೆ ದೊರೆಯಲಿದೆ. ನಂತರ ಈಗಾಗಲೇ ಉದ್ಘಾಟನೆಗೆ ಸಿದ್ದಗೊಳಿಸಿರುವ ಏಳು ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಈಗ ಜಿಲ್ಲೆಗೆ 11 ಸಾವಿರ ಕೋವಿಸೀಲ್ಡ್ ಲಸಿಕೆ ವಿತರಣೆಯಾಗಿದ್ದು, ಇದನ್ನು ಎಲ್ಲ ಸರಕಾರಿ ಆಸ್ಪತ್ರೆಗಳ ನೊಂದಾಯಿತ ಆರೋಗ್ಯ ಸಿಬ್ಬಂದಿಗೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹಂಚಿಕೆಯಾಗಿ ಬರುವ ಲಸಿಕೆಯನ್ನು ಉಳಿದ ನೊಂದಾಯಿತ ಆರೋಗ್ಯ ಸಿಬ್ಬಂದಿ ಹಾಗೂ ಕೊರೋನಾ ವಾರಿಯರ್ ಗಳಿಗೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶಂವತ ಮದಿನಕರ, ಆರ್.ಸಿ.ಎಚ್. ಅಧಿಕಾರಿ ಡಾ. ಎಸ್.ಎಮ್.ಹೊನಕೇರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಮ್.ನಿಂಬಣ್ಣವರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಅಯ್ಯನಗೌಡರ, ಧಾರವಾಡ ತಾಲೂಕಾ ವೈದ್ಯಾಧಿಕಾರಿ ಡಾ. ಕೆ.ಎನ್.ತನುಜಾ,ಶ್ರೀಪಾದ ಕಂಬಾರ,ನಾಗರಾಜ,ಮಹೇಶ್,ಗಣಪತಿ,ವಿರೇಶ, ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳಗಾವಿಯಿಂದ ಕೋವಿಸೀಲ್ಡ್ ಲಸಿಕೆ ಹೊತ್ತು ಬಂದ ವಾಹನಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆರತಿ ಬೆಳಗಿ, ಪುಷ್ಪ ಹಾಕಿ ಸ್ವಾಗತಿಸಿದರು. ಹರ್ಲಾಪೂರದ ಸಿ.ವಾಯ್.ಸಿ.ಡಿ ಕಲಾತಂಡದ ಜಾನಪದ ಕಲಾವಿದ ಶಂಬಯ್ಯ ಹಿರೇಮಠ ನೇತೃತ್ವದ ಕಲಾವಿದರ ತಂಡ ಕೋವಿಡ್ ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ಬರಮಾಡಿಕೊಂಡರು.