ಹುಬ್ಬಳ್ಳಿ –
ನಗರದ ಸಮಗ್ರ ಅಭಿವೃದ್ಧಿ ಯೋಜನೆಗೆ 2019ರಲ್ಲಿ ಅನುಮೋದನೆ ನೀಡಲಾಗಿದ್ದು ಹಲವಾರು ಅಗತ್ಯ ಮಾರ್ಪಾಡುಗಳೊಂದಿಗೆ ಯೋಜನೆಯನ್ನು ಜಿ.ಐ.ಎಸ್ ಒಳಪಡಿಸಿ, ಪರಿಷ್ಕೃತ ಸಮಗ್ರ ಅಭಿವೃದ್ಧಿ ಯೋಜನೆ ಸಿದ್ದಪಡಿಸಿ ಸರ್ಕಾರದ ಅನುಮೋದನೆ ಕಳುಹಿಸಲಾಗುವುದು ಎಂದು ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ ಹೇಳಿದರು.ನವನಗರದ ಹುಡಾ ಕಚೇರಿಯಲ್ಲಿ ಜರುಗಿದ ಮಾಸಿಕ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿ.ಐ.ಎಸ್ ಸರ್ವೇ ಕಾರ್ಯವನ್ನು ಖಾಸಗಿ ಕಂಪನಿಗೆ ನೀಡಿದ್ದು, ಈಗಾಗಲೇ ಸರ್ವೇ ಕಾರ್ಯ ಪ್ರಾರಂಭಿಸಿದ್ದಾರೆ. ಯೋಜನೆಯನ್ನು ಜನಪ್ರತಿನಿಧಿಗಳು ಹಾಗೂ ನಾಗರಿಕರೊಂದಿಗೆ ಚರ್ಚಿಸಿ ಬರುವ ಮಾರ್ಚ್ ಒಳಗಾಗಿ ಸಿದ್ದಪಡಿಸಲಾಗುವುದು.
ಪ್ರಾಧಿಕಾರದಿಂದ ಅನಧಿಕೃತ ಲೇ ಔಟ್ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲವುದಿಲ್ಲ. ಇದುವರೆಗೆ 177 ಜನರಿಗೆ ಅನಧಿಕೃತ ಲೇ ಔಟ್ ಸಂಬಂಧವಾಗಿ ನೋಟಿಸ್ ನೀಡಲಾಗಿದೆ. ನಗರದಲ್ಲಿ ಇದೊಂದು ದೊಡ್ಡ ಹಗರಣವಾಗಿ ಬೆಳೆಯುತ್ತಿದೆ. ನಿಯಮಾನುಸಾರ ಲೇ ಔಟ್ ವಿನ್ಯಾಸ ಮಾಡದೆ ಹಲವಾರು ಜನರು 100 ರೂಪಾಯಿ ಬಾಂಡ್ ಪೇಪರ್ ಮೇಲೆ ನಿವೇಶನ ಮಾರಾಟ ಮಾಡಿದ್ದಾರೆ. ಮುಗ್ದ ಜನರು ಇವುಗಳನ್ನು ಕೊಂಡು ಮನೆಗಳನ್ನು ಸಹ ನಿರ್ಮಿಸಿದ್ದಾರೆ. ಜಮೀನನ ಮಾಲಿಕರ ಹೆಸರು ಉತಾರದಲ್ಲಿ ಹಾಗೆಯೇ ಇರುತ್ತದೆ. ಮಾಲೀಕರು ನಿವೇಶನಗಳನ್ನು ಮತ್ತೇ ಬೇರೆಯೊಬ್ಬರಿಗೆ ಮಾರಿ ಮೊದಲು ಕೊಂಡವರಿಗೆ ತೊಂದರೆ ನೀಡುತ್ತಿದ್ದಾರೆ. ಇದನ್ನು ತಪ್ಪಿಸಲು ಅನಧಿಕೃತ ನಿವೇಶನಗಳ ಜಾಗದ ಉತಾರದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಸರ್ಕಾರದ ಹೆಸರನ್ನು ಕೂರಿಸಲಾಗುವುದು. ಇದುವರೆಗೆ ಪ್ರಾಧಿಕಾರದಿಂದ 359 ನಾಗರಿಕ ಸೌಲಭ್ಯ ( ಸಿ.ಎ) ನಿವೇಶನಗಳನ್ನು ನೀಡಲಾಗಿದೆ. ಇವುಗಳ ಬಳಕೆ ಕುರಿತು ಸರ್ವೇ ಪ್ರಗತಿಯಲ್ಲಿದೆ ಎಂದರು.
ಲಾಟರಿ ಮೂಲಕ ನಿವೇಶನಗಳ ಹಂಚಿಕೆ
ಪ್ರಾಧಿಕಾರದ ಅಡಿಯಲ್ಲಿ ಲಕ್ಕಮನಹಳ್ಳಿ ವ್ಯಾಪ್ತಿಯ 62 ನಿವೇಶನಗಳಿಗಾಗಿ 328 ಅರ್ಜಿಗಳು ಸ್ವೀಕೃತವಾಗಿವೆ. ತಡಿಸಕೊಪ್ಪ ವ್ಯಾಪ್ತಿಯವ 225 ನಿವೇಶನಗಳಿಗಾಗಿ 3178 ಅರ್ಜಿಗಳು ಸ್ವೀಕೃತವಾಗಿವೆ. ನಿವೇಶನಗಳನ್ನು ಲಾಟರಿ ಮುಖಾಂತರ ಹಂಚಿಕೆ ಮಾಡಲಾಗುವುದು. ಬಿಡಿ ಹಾಗೂ ಮೂಲೆ ನಿವೇಶನಗಳು ಸೇರಿ ಒಟ್ಟು 1300 ರಿಂದ 1400 ಸೈಟುಗಳು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇವೆ. ಇದುವರೆಗೆ 196 ಮೂಲೆ ನಿವೇಶನಗಳನ್ನು ಪಾರದರ್ಶಕವಾಗಿ ಇ-ಹರಾಜು ಮೂಲಕ ಹಂಚಿಕೆ ಮಾಡಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ ನೀರಿಕ್ಷೆಗಿಂತ ಹೆಚ್ಚಿನ ಲಾಭವಾಗಿದೆ ಎಂದರು.
ಮಾಸಿಕ ಸಭೆಯಲ್ಲಿ ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಶಾಸಕರಾದ ಬಸವರಾಜ್ ಹೊರಟ್ಟಿ, ಅರವಿಂದ ಬೆಲ್ಲದ, ಪ್ರಸಾದ್ ಅಬ್ಬಯ್ಯ, ಶ್ರೀನಿವಾಸ ಮಾನೆ, ಪ್ರದೀಪ್ ಶೆಟ್ಟರ್, ಸಿ.ಎಂ.ನಿಂಬಣ್ಣನವರ್, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ, ಹುಡಾ ಆಯುಕ್ತ ವಿನಾಯಕ ಪಾಲನಕರ, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸೇರಿದಂತೆ ಇತರೆ ನಿರ್ದೇಶಕ ಮಂಡಳಿ ಸದಸ್ಯರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.